ಕೊರಸಿಗನ ಮರ

ಅಪೋಸೈನೇಸೀ ಕುಟುಂಬಕ್ಕೆ ಸೇರಿದ ಒಂದು ಪೊದೆ ಅಥವಾ ಚಿಕ್ಕಮರ. ಹೊಲೇರಿನ ಆಂಟಿಡಿಸಿಂಟ್ರಿಕ ಇದರ ವೈಜ್ಞಾನಿಕ ನಾಮ. ಇದಕ್ಕೆ ಕುಡ್ಸಾಲು, ಬೆಪ್ಪಾಲೆ, ಕೊರ್ಚಿಮರ ಎಂಬ ಇತರ ಹೆಸರುಗಳೂ ಉಂಟು. ಭಾರತದ ಮೂಲವಾಸಿಯಾದ ಇದು ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಸುಂದರವಾದ ಹಾಗೂ ಸುಗಂಧಯುಕ್ತವಾದ ಹೂಗಳನ್ನು ಬಿಡುವುದರಿಂದ ಕೊರಸಿಗನ ಮರವನ್ನು ಉದ್ಯಾನಗಳಲ್ಲೂ ದೇವಸ್ಥಾನಗಳಲ್ಲೂ ಬೆಳೆಸುವುದುಂಟು.

	ಕೊರಸಿಗನ ಮರ ಸುಮಾರು 30'-40' ಎತ್ತರಕ್ಕೆ ಬೆಳೆಯುವ ಪರ್ಣಪಾತಿ ಮರ. ಮರದ ಮುಖ್ಯ ಕಾಂಡವೇ ಸುಮಾರು 10'-20' ಎತ್ತರ ಇರುತ್ತದೆ. ತೊಗಟೆ ಬಿರುಸಾಗಿಯೂ ಕಂದು ಬಣ್ಣದ್ದಾಗಿಯೂ ಇದೆ; ಆಗಿಂದಾಗ್ಗೆ ಪದರಪದರವಾಗಿ ಬಿಟ್ಟುಕೊಳ್ಳುತ್ತದೆ. ಎಲೆಗಳು 6"-12" ಉದ್ದವಾಗಿವೆ; ಅವುಗಳ ಜೋಡಣೆ ಅಭಿಮುಖ ಮಾದರಿಯದು. ಎಲೆಯ ತೊಟ್ಟು ಬಹಳ ಚಿಕ್ಕವು. ಜನವರಿ-ಫೆಬ್ರವರಿ ತಿಂಗಳಿನ ವೇಳೆಗೆ ಎಲೆಗಳೆಲ್ಲ ಉದುರಿ ಹೋಗುತ್ತವೆ. ಹೂಗಳು ರೆಂಬೆಗಳ ತುದಿಯಲ್ಲಿ ಇಲ್ಲವೆ ಎಲೆಗಳ ಕಂಕುಳಲ್ಲಿ ಹುಟ್ಟುವ ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪ್ರತಿ ಹೂವಿನಲ್ಲೂ 5 ಪುಷ್ಪಪತ್ರಗಳೂ 5 ದಳಗಳೂ 5 ಕೇಸರಗಳೂ 2 ಕಾರ್ಪೆಲ್‍ಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯವೂ ಇವೆ. ದಳಗಳು ಒಂದರೊಡನೊಂದು ಕೂಡಿಕೊಂಡಿವೆ. ಕೇಸರಗಳ ಬುಡ ದಳಸಮೂಹದೊಡನೆ ಕಂಠದ ಬಳಿ ಅಂಟಿಕೊಂಡಿವೆ. ಫಲ ಎರಡು ಕೊಳವೆಯಾಕಾರದ ಮೆರಿಕಾರ್ಪ್ ಎಂಬ ಭಾಗಗಳಿಂದ ಕೂಡಿದ ಫಾಲಿಕಲ್ ಜೋಡಿ. ಬೀಜಗಳ ತುದಿಯಲ್ಲಿ ರೇಷ್ಮೆಯಂಥ ಉದ್ದವಾದ ಕೂದಲುಗಳ ಕುಚ್ಚು ಇದೆ. ಇದರಿಂದ ಬೀಜ ಪ್ರಸರಣಕ್ಕೆ ಅನುಕೂಲ. 

	ಕೊರಸಿಗನ ಮರದಿಂದ ಹಲವಾರು ಉಪಯೋಗಗಳಿವೆ. ಇದರ ಕಾಂಡ ಹಾಗೂ ಕೊಂಬೆಗಳನ್ನು ಸೌದೆಯಾಗಿಯೂ ಎಲೆಗಳನ್ನು ಗೊಬ್ಬರವಾಗಿಯೂ ಬಳಸುವುದಿದೆ. ಕಾಂಡ ಹಾಗೂ ಬೇರಿನ ತೊಗಟೆಗಳಿಗೆ ಔಷಧೀಯ ಮಹತ್ತ್ವ ಉಂಟು. ಕಾಂಡದ ತೊಗಟೆಯನ್ನು ಕೊನೆಸಿ ತೊಗಟೆ ಅಥವಾ ಕುರ್ಚಿ ಎಂಬ ಹೆಸರಿನಿಂದ ಮಾರುಕಟ್ಟೆಗಳಲ್ಲಿ ಮಾರುತ್ತಾರೆ. ಇದಕ್ಕೆ ಪ್ರತಿಬಂಧಕ, ಜಂತುನಾಶಕ, ಜ್ವರನಿವಾರಕ ಹಾಗೂ ಶಕ್ತಿವರ್ಧಕ ಗುಣಗಳುಂಟು. ಇದನ್ನು ಅತಿಸಾರ ಮತ್ತು ಆಮಶಂಕೆ ರೋಗಗಳ ನಿವಾರಣೆಗೆ ಬಳಸಲಾಗುತ್ತದೆ. ಮೂಲವ್ಯಾಧಿ, ಮೂತ್ರಸ್ರಾವ ತೊಂದರೆಗಳು, ಅಜೀರ್ಣ, ಚರ್ಮ ಹಾಗೂ ಗುಲ್ಮದ ರೋಗಗಳಿಗೂ ಇದು ಸಿದ್ಧೌಷಧಿ. ಈ ಎಲ್ಲ ಔಷಧೀಯ ಗುಣಗಳಿಗೆ ತೊಗಟೆಯಲ್ಲಿರುವ ಕೊನೆಸಿನ್, ಕುರ್ಚಿನ್, ಕೋನಮೈನ್, ಹೊಲೇರಿನೈನ್, ಲೆಟೋಸೈನ್, ಕುರ್ಚಿಸೈನ್, ಮುಂತಾದ ಸಸ್ಯಕ್ಷಾರಗಳೇ ಕಾರಣ. ಸಸ್ಯಕ್ಷಾರಗಳಲ್ಲದೆ ತೊಗಟೆಯಲ್ಲಿ ಒಂದು ಬಗೆಯ ಅಂಟೂ ಇದೆ. ಇದು ಕೂಡ ಆಮಶಂಕೆಯನ್ನು ನಿವಾರಿಸಬಲ್ಲದು ಎಂದು ತಿಳಿದಿದೆ, ಕೊರಸಿಗನ ಮರದ ಬೀಜಗಳಿಗೆ ಕೊಡಮುರ್ಕನ ಬೀಜ ಎಂಬ ಹೆಸರಿದೆ. ಇವಕ್ಕೂ ತೊಗಟೆಯ ಗುಣಗಳೇ ಇವೆ. ಕೊರಸಿಗನ ಮರದ ಎಲೆಗಳನ್ನು ವ್ರಣ, ಹುಣ್ಣು ಮುಂತಾದವನ್ನು ಗುಣಪಡಿಸಲೂ ಶ್ವಾಸಕೋಶ ಸಂಬಂಧ ಕಾಯಿಲೆಗಳಿಗೂ ಬಳಸುತ್ತಾರೆ. ಬರಿಯ ಔಷಧೀಯ ಮಹತ್ತ್ವವಲ್ಲದೆ ಕೊರಸಿಗನ ಮರಕ್ಕೆ ಬೇರೆ ಉಪಯೋಗಗಳೂ ಉಂಟು. ಬಾಚಣಿಗೆ, ಚಿತ್ರಗಳ ಕಟ್ಟು, ಪೆಟ್ಟಿಗೆಗಳು, ಆಟದ ಸಾಮಾನುಗಳು, ಊರೆಗೋಲುಗಳು, ನೇಗಿಲು, ಮಣೆ, ಸ್ಲೇಟ್ ಕಟ್ಟುಗಳು ಮುಂತಾದ ವಿವಿಧ ವಸ್ತುಗಳ ತಯಾರಿಕೆಯಲ್ಲಿ ಮರವನ್ನು ಬಳಸುತ್ತಾರೆ. ಗಣಿತ ಸಲಕರಣೆಗಳು, ಕುಂಚದ ಹಿಡಿಗಳು ಇತ್ಯಾದಿ ಮಾಡಲೂ ಉಪಯೋಗಿಸುವುದಿದೆ.
(ಎಂ.ಎಸ್.ಎಸ್.ಆರ್; ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ